ಸೋಸಲೆ
	ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನ ಒಂದು ಗ್ರಾಮ ಮತ್ತು ಹೋಬಳಿ ಕೇಂದ್ರ. ಕಸಬೆಯ ಉತ್ತರಕ್ಕೆ 4 ಕಿಮೀ ದೂರದಲ್ಲಿ ಕಾವೇರಿ ನದಿಯ ಎಡದಂಡೆಯ ಮೇಲಿದೆ.

	ಪ್ರಾಚೀನ ಕಾಲದಿಂದಲೂ ಬತ್ತದ ಬೆಳೆಗೆ ಪ್ರಸಿದ್ಧಿ ಹೊಂದಿರುವ ಈ ಗ್ರಾಮ ಒಂದು ಧರ್ಮಕ್ಷೇತ್ರ. ಹಿಂದೆ ಈ ಗ್ರಾಮ ವಡಕರೆನಾಡು (ಬಡಗರೆ) 200ರಲ್ಲಿ ಸೇರಿತ್ತು. ಸು. 8-9ನೆಯ ಶತಮಾನದ ಶಾಸನವೊಂದ ರಿಂದ ವಿಕ್ರಮಾದಿತ್ಯನೆಂಬ ಅರಸನ ಆಳಿಕೆಗೆ ಒಳಪಟ್ಟಿತೆಂಬುದಾಗಿ ತಿಳಿದುಬರುತ್ತದೆ. ಇಲ್ಲಿ ಪ್ರಸಿದ್ಧ ವ್ಯಾಸರಾಯರ ಮಠವಿದೆ. ಇದು ಮಧ್ವಾಚಾರ್ಯರ ಶಿಷ್ಯಪರಂಪರೆಯಲ್ಲಿ ಬಂದ ರಾಜೇಂದ್ರತೀರ್ಥರಿಂದ ಸ್ಥಾಪಿತವಾದುದು. ಈ ಮಠದಲ್ಲಿ ಸುಮಾರು ಹದಿನೈದು ಶಾಸನಗಳು ದೊರಕಿದ್ದು ಅವು ಮಠಕ್ಕೆ ದತ್ತಿ ದಾನ ನೀಡಿದ ವಿಷಯಗಳನ್ನು ತಿಳಿಸುತ್ತವೆ. ಇವು ವಿಜಯನಗರ ದೊರೆಗಳಿಗೆ ಮತ್ತು ಮಧುರೆ ನಾಯಕರಿಗೆ ಸೇರಿದ್ದವೆಂದು ತಿಳಿದುಬರುತ್ತದೆ. ಈ ಶಾಸನಗಳು ಸಂಸ್ಕøತ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿವೆ. ಪ್ರತಿವರ್ಷವೂ ವಿದ್ವಾಂಸರ ಸಭೆ ಸೇರಿಸಿ ವಿದ್ವಾಂಸರನ್ನು ಗೌರವಿಸುವ ಪರಂಪರೆಯನ್ನು ಈ ಮಠ ನಡೆಸಿಕೊಂಡು ಬರುತ್ತಿದೆ. ಕನ್ನಡದಲ್ಲಿ ಶಾರೀರಕ ಪ್ರಕಾಶಿಕೆ, ಅಂತಃಕರಣ ಪ್ರಕಾಶಿಕೆ, ಸ್ವರೂಪ ಪ್ರಕಾಶಿಕೆ, ಪರಮಾತ್ಮ ಪ್ರಕಾಶಿಕೆ, ನಿಜದೀಪ್ತಿ ಪ್ರಕಾಶಿಕೆ, ಪರಮುಕ್ತಿ ಪ್ರದೀಪಿಕೆ ಎಂಬ ಕೃತಿಗಳನ್ನೂ ಸಂಸ್ಕøತದಲ್ಲಿ ಶಿವಾಧಿಕ್ಯ ಶಿಖಾಮಣಿ, ಸಿದ್ಧಾಂತ ಶಿಖಾಮಣಿ, ಸಾಂಬಶಿವಾಧಿಕ್ಯಂ, ಶಿವಾಧಿಕ್ಯ ಪ್ರದೀಪಿಕಾ, ಶಿವಮತಾಧಿಕ್ಯ ತಾರಾವಳಿ, ಪ್ರಾರಬ್ಧ ದೀಪಿಕಾ ಎಂಬ ಗ್ರಂಥಗಳನ್ನೂ ಮಹಿಮ್ನ ಪ್ರದೀಪಿಕಾ ಮತ್ತು ಸಿದ್ಧಾರ್ಥ ಸಂಬೋಧಿನಿ ಎಂಬ ಟೀಕೆಗಳನ್ನೂ ಬರೆದ ವೀರಶೈವ ಕವಿ ರೇವಣಾಚಾರ್ಯ (ಸು. 1623) ಈ ಸ್ಥಳದವನು.				
		(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ